ಕಲ್ಯಾಣಿ ಪ್ರಿಯದರ್ಶನ್ (ಜನನ ೫ ಏಪ್ರಿಲ್ ೧೯೯೩) ಇವರು ಭಾರತೀಯ ನಟಿಯಾಗಿದ್ದು, ಕೆಲವು ತಮಿಳು ಮತ್ತು ತೆಲುಗು ಚಿತ್ರಗಳ ಜೊತೆಗೆ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಯಾಣಿಯವರು ಒಂದು ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿ ಮತ್ತು ಮೂರು ದಕ್ಷಿಣ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ಅವರಿಗೆ ಜನಿಸಿದ ಕಲ್ಯಾಣಿಯವರು ಸಹಾಯಕ ಪ್ರೊಡಕ್ಷನ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತೆಲುಗು ಚಿತ್ರವಾದ ಹಲೋ (೨೦೧೭) ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದರಿಂದ ಅವರು ದಕ್ಷಿಣದ ಅತ್ಯುತ್ತಮ ಮಹಿಳಾ ಚೊಚ್ಚಲ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದರು. ನಂತರ, ಅವರು ಹೀರೋ (೨೦೧೯) ಚಿತ್ರದ ಮೂಲಕ ತಮಿಳು ಮತ್ತು ವರನೆ ಅಗತ್ಯಮುಂಡ್ (೨೦೨೦) ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಸೇರಿದರು. ತದನಂತರ, ಚಿತ್ರಲಹರಿ (೨೦೧೯), ಮಾನಾಡು (೨೦೨೧), ಹೃದಯಂ (೨೦೨೨), ತಲ್ಲುಮಾಲಾ (೨೦೨೨) ಮತ್ತು ಬ್ರೋ ಡ್ಯಾಡಿ (೨೦೨೨) ಚಿತ್ರಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಅವರು ಮಲಯಾಳಂ ಚಿತ್ರದಲ್ಲಿ ಅತ್ಯುತ್ತಮ ನಟಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದರು. == ಆರಂಭಿಕ ಜೀವನ ಮತ್ತು ಕುಟುಂಬ == ಕಲ್ಯಾಣಿಯವರು ೫ ಏಪ್ರಿಲ್ ೧೯೯೩ ರಂದು ಚೆನ್ನೈನಲ್ಲಿ ಮಲಯಾಳಿ ಕುಟುಂಬದಲ್ಲಿ ಭಾರತೀಯ ಚಲನಚಿತ್ರ ನಿರ್ಮಾಪಕರಾದ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ದಂಪತಿಗಳಿಗೆ ಮಗಳಾಗಿ ಜನಿಸಿದರು. ಕಲ್ಯಾಣಿಯವರು ಇಬ್ಬರು ಮಕ್ಕಳಲ್ಲಿ ಹಿರಿಯರಾಗಿದ್ದು, ಸಿದ್ಧಾರ್ಥ್ ಎಂಬ ಕಿರಿಯ ಸಹೋದರನನ್ನು ಹೊಂದಿದ್ದಾರೆ. ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ಚೆನ್ನೈನ ಲೇಡಿ ಆಂಡಾಲ್‌ನಲ್ಲಿ ಪೂರ್ಣಗೊಳಿಸಿ, ಸಿಂಗಾಪುರದಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಅಲ್ಲಿ ಅವರು ರಂಗಭೂಮಿ ಗುಂಪುಗಳಲ್ಲಿಯೂ ಕೆಲಸ ಮಾಡಿದರು. ಅಲ್ಲಿಂದ, ನ್ಯೂಯಾರ್ಕ್‌ನ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್‌ನಿಂದ ವಾಸ್ತುಶಿಲ್ಪವನ್ನು ಅಧ್ಯಯನ ಮಾಡಿದರು. ಕಲ್ಯಾಣಿಯವರು ಭಾರತಕ್ಕೆ ಮರಳಿದ ನಂತರ, ಅವರು ಪಾಂಡಿಚೆರಿಯ ಆದಿಶಕ್ತಿ ಥಿಯೇಟರ್‌ನಲ್ಲಿ ನಟನಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. == ವೃತ್ತಿಜೀವನ == === ಚೊಚ್ಚಲ ಮತ್ತು ಆರಂಭಿಕ ಕೆಲಸ (೨೦೧೭–೨೦೨೦) === ಕಲ್ಯಾಣಿಯವರು ೨೦೧೩ ರಲ್ಲಿ, ಹಿಂದಿ ಚಿತ್ರವಾದ ಕ್ರಿಶ್ ೩ (೨೦೧೩) ರಲ್ಲಿ ಸಾಬು ಸಿರಿಲ್ ಅವರ ಅಡಿಯಲ್ಲಿ ಸಹಾಯಕ ನಿರ್ಮಾಣ ವಿನ್ಯಾಸಕಿಯಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ೨೦೧೬ ರಲ್ಲಿ, ಅವರು ತಮಿಳು ಚಿತ್ರವಾದ ಇರು ಮುಗನ್ (೨೦೧೬) ರಲ್ಲಿ ಸಹಾಯಕ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ಕಲ್ಯಾಣಿಯವರು ೨೦೧೭ ರ, ತೆಲುಗು ಚಿತ್ರವಾದ ಹಲೋ ಮೂಲಕ ಅಖಿಲ್ ಅಕ್ಕಿನೇನಿ ಜೊತೆಗಿನ ಮೊದಲ ನಟನೆಯನ್ನು ಮಾಡಿದರು. ಚಿತ್ರವು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಿತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸರಾಸರಿಗಿಂತ ಕಡಿಮೆ ಗಳಿಕೆಯಾಯಿತು. "ಕಲ್ಯಾಣಿ ಪ್ರಿಯದರ್ಶನ್ ಅವರ ಪ್ರವೇಶವು ಚಲನಚಿತ್ರಕ್ಕೆ ಸ್ವಲ್ಪ ತಡವಾಗಿ ಸಂಭವಿಸುತ್ತದೆ. ಆದರೆ, ಇದು ಅಖಿಲ್ ಅವರೊಂದಿಗೆ ಉತ್ತಮ ಕೆಮಿಸ್ಟ್ರಿಯನ್ನು ಹಂಚಿಕೊಳ್ಳುವ ಪ್ರಶಂಸನೀಯ ಚೊಚ್ಚಲ ಚಿತ್ರವಾಗಿದೆ" ಎಂದು ದಿ ಹಿಂದೂ ಹೇಳಿದೆ. ಕಲ್ಯಾಣಿಯವರು ೨೦೧೯ ರಲ್ಲಿ, ಮೂರು ಚಿತ್ರದ ಬಿಡುಗಡೆಗಳನ್ನು ಹೊಂದಿದ್ದರು. ಅವರು ಮೊದಲ ಚಿತ್ರಲಹರಿಯಲ್ಲಿ ಸಾಯಿ ಧರಮ್ ತೇಜ್ ಜೊತೆಗೆ ಕಾಣಿಸಿಕೊಂಡರು. ಈ ಚಲನಚಿತ್ರವು ಮಿಶ್ರಿತ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾಯಿತು. ಫಸ್ಟ್‌ಪೋಸ್ಟ್ ಹೇಳುವಂತೆ, "ಕಲ್ಯಾಣಿ ಪ್ರಿಯದರ್ಶನ್‌ಯವರು ಮುಗ್ಧ, ನಿಷ್ಕಪಟ ಹುಡುಗಿಯಾಗಿ ಉತ್ತಮ ಕೆಲಸ ಮಾಡುತ್ತಾರೆ. ಆದರೆ, ಸಾಯಿ ಧರಮ್ ತೇಜ್ ಅವರೊಂದಿಗೆ ಅವರು ನಟಿಸಿದ್ದ ರೋಮ್ಯಾಂಟಿಕ್ ಹಾಡು ಅಷ್ಟು ನೈಜತೆಯನ್ನು ಹೊಂದಿರಲಿಲ್ಲ". ಅವರ ವರ್ಷದ ಇತರ ಎರಡು ಚಿತ್ರದ ಬಿಡುಗಡೆಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ನಂತರ, ಅವರು ರಣರಂಗಮ್ ಚಿತ್ರದಲ್ಲಿ ಶರ್ವಾನಂದ್ ಮತ್ತು ಹೀರೋ ಚಿತ್ರದಲ್ಲಿ ಶಿವಕಾರ್ತಿಕೇಯನ್ ಅವರ ಜೊತೆಗೆ ಕಾಣಿಸಿಕೊಂಡರು. ೨೦೨೦ ರಲ್ಲಿ, ಅವರು ದುಲ್ಕರ್ ಸಲ್ಮಾನ್ ಜೊತೆಗೆ ವರನೆ ಅಗತ್ಯಮುಂಡ್ ಚಿತ್ರದ ಮೂಲಕ ಮಲಯಾಳಂಗೆ ಪಾದಾರ್ಪಣೆ ಮಾಡಿದರು. ದಿ ನ್ಯೂಸ್ ಮಿನಿಟ್ ಪ್ರಕಾರ, "ಕಲ್ಯಾಣಿಯವರು ಯುವತಿಯಾಗಿ ತಮ್ಮ ಪಾತ್ರವನ್ನು ಸುಲಭವಾಗಿ ನಿರ್ವಹಿಸುತ್ತಾರೆ. ಕುತೂಹಲಕಾರಿಯಾಗಿ, ತಾಯಿ ಮತ್ತು ಮಗಳ ನಡುವೆ ಅವರು ಹೆಚ್ಚು ಸಾಂಪ್ರದಾಯಿಕವಾಗಿದ್ದಾರೆ. ನಂತರ, ಅವರು ಪುಥಮ್ ಪುದು ಕಾಲೈ ಚಿತ್ರದ ಒಂದು ಭಾಗದಲ್ಲಿ ಊರ್ವಶಿಯ ಕಿರಿಯ ಆವೃತ್ತಿಯಲ್ಲಿ ಅಭಿನಯಿಸಿದರು. "ಕಲ್ಯಾಣಿ ಪ್ರಿಯದರ್ಶನ್‌ರವರು ವರ್ತಮಾನ ಮತ್ತು ಭೂತಕಾಲದ ಘಟನೆಗಳನ್ನು ಪರಿಪೂರ್ಣವಾಗಿ ನಟಿಸಿದ್ದಾರೆ" ಎಂದು ಎನ್‌ಡಿಟಿವಿ ಇಂಡಿಯಾ ಪ್ರಕಟಿಸಿದ್ದಾರೆ. === ವೃತ್ತಿಜೀವನದ ಪ್ರಗತಿ ಮತ್ತು ಯಶಸ್ಸು (೨೦೨೧-ಪ್ರಸ್ತುತ) === ೨೦೨೧ ರ ಮೊದಲ ಚಿತ್ರದಲ್ಲಿ, ಕಲ್ಯಾಣಿಯವರು ತಮಿಳು ಚಿತ್ರವಾದ ಮಾನಾಡುನಲ್ಲಿ ಸಿಲಂಬರಸನ್ ಜೊತೆಗೆ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, "ಕಲ್ಯಾಣಿ ಪ್ರಿಯದರ್ಶನ್‌ರವರು ಉತ್ತಮ ಮತ್ತು ಅವರು ಪಡೆಯುವ ಸೀಮಿತ ಪರದೆಯ ಜಾಗದಲ್ಲಿ ಮಿಂಚುತ್ತಾರೆ" ಎಂಬುದಾಗಿದೆ. ಅದೇ ವರ್ಷದಲ್ಲಿ ಅವರ ಮುಂದಿನ ಚಿತ್ರ ಮರಕ್ಕರ್: ಲಯನ್ ಆಫ್ ದಿ ಅರೇಬಿಯನ್ ಸೀ ಪ್ರಣವ್ ಮೋಹನ್‌ಲಾಲ್ ಅವರೊಂದಿಗೆ ಬಿಡುಗಡೆಯಾಯಿತು. ಈ ಚಿತ್ರವು ಮಿಶ್ರ ಮತ್ತು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. ೨೦೨೨ ವರ್ಷವು ಕಲ್ಯಾಣಿ ಅವರ ವೃತ್ತಿಜೀವನದಲ್ಲಿ ಒಂದು ತಿರುವು ನೀಡಿತು. ಅವರ ಎಲ್ಲಾ ಮೂರು ಚಿತ್ರದ ಬಿಡುಗಡೆಗಳು ಯಶಸ್ವಿಯಾದವು ಮತ್ತು ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದವು. ಅವರ ಮೊದಲ ಹೃದಯಂ ಚಿತ್ರದಲ್ಲಿ ಪ್ರಣವ್ ಮೋಹನ್‌ಲಾಲ್ ಜೊತೆಗೆ ಕಾಣಿಸಿಕೊಂಡರು. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಯಿತು. "ಕಲ್ಯಾಣಿಯವರು ಸೂಕ್ತವಾಗಿ ನಟಿಸಿದ್ದಾರೆ ಮತ್ತು ಹೃದಯಂ ಚಿತ್ರವು ಅವರ ಅತ್ಯುತ್ತಮ ಸಮಯ" ಎಂದು ಸಿನೆಮಾ ಎಕ್ಸ್‌ಪ್ರೆಸ್ ಹೇಳಿದೆ. "ಕಲ್ಯಾಣಿಯವರು ನಿತ್ಯಾ ಪಾತ್ರದಲ್ಲಿ ಪರಿಣಾಮಕಾರಿಯಾಗಿದ್ದರು ಮತ್ತು ಪ್ರಣವ್ ಅವರೊಂದಿಗಿನ ಅವರ ಕೆಮಿಸ್ಟ್ರಿ ಚಿತ್ರದ ಉನ್ನತ ಅಂಶಗಳಲ್ಲಿ ಒಂದಾಗಿದೆ" ಎಂದು ಮನೋರಮಾ ಆನ್ಲೈನ್ ಗಮನಿಸಿದೆ. ನಂತರ, ಅವರು ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಬ್ರೋ ಡ್ಯಾಡಿ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ಬಿಡುಗಡೆಯಾಯಿತು. ಇಂಡಿಯಾ ಟುಡೇ ಗಮನಿಸಿದಂತೆ, "ಅನ್ನಾ ಪಾತ್ರವು ಕಲ್ಯಾಣಿಯವರಿಗೆ ಒಂದು ಬಹಿರಂಗವಾಗಿದೆ. ಅವರ ಸಹಜವಾದ ಅಭಿವ್ಯಕ್ತಿಗಳು ಪ್ರತಿ ಸನ್ನಿವೇಶಕ್ಕೂ ಸೂಕ್ತವಾಗಿವೆ". ಅವರು ತಮ್ಮ ವರ್ಷದ ಅಂತಿಮ ಚಿತ್ರವಾದ, ತಲ್ಲುಮಾಲಾದಲ್ಲಿ ಟೊವಿನೋ ಥಾಮಸ್ ಜೊತೆಗೆ ಕಾಣಿಸಿಕೊಂಡರು. ಇದು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಇದುವರೆಗೆ ಅತಿ ಹೆಚ್ಚು ಹಣ ಗಳಿಸಿದ ಮಲಯಾಳಂ ಚಲನಚಿತ್ರಗಳಲ್ಲಿ ಒಂದಾಯಿತು. ದಿ ವೀಕ್ ಗಮನಿಸಿದಂತೆ, "ಕಲ್ಯಾಣಿಯ ಬೆಪಾತು ಒಂದು ಬಲವಾದ ಪಾತ್ರವಾಗಿದ್ದು, ಅವರು ದೊಡ್ಡ ಸಾಮಾಜಿಕ ಮಾಧ್ಯಮದ ಅನುಯಾಯಿಗಳನ್ನು ಹೇಳಿಕೊಳ್ಳುತ್ತಾರೆ. ಪಾತು ಪಾತ್ರವು ಕಲ್ಯಾಣಿಯವರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ" ಎಂಬುದಾಗಿದೆ. ಕಲ್ಯಾಣಿಯವರು ೨೦೨೩ ರಲ್ಲಿ, ಎರಡು ಚಿತ್ರದ ಬಿಡುಗಡೆಗಳನ್ನು ಹೊಂದಿದರು. ಅವರು ಮೊದಲು ಶೇಷಮ್ ಮೈಕ್-ಇಲ್ ಫಾತಿಮಾದಲ್ಲಿ ಫುಟ್‌ಬಾಲ್ ನಿರೂಪಕರಾಗಲು ಬಯಸುವ ಮುಸ್ಲಿಂ ಮಹಿಳೆಯ ಪಾತ್ರವನ್ನು ನಿರ್ವಹಿಸಿದರು. ದಿ ಹಿಂದೂ ಪತ್ರಿಕೆಯ ಪ್ರಕಾರ, "ಕಲ್ಯಾಣಿಯವರು ತಮ್ಮ ಪರದೆಯ ಉಪಸ್ಥಿತಿಯೊಂದಿಗೆ ಶ್ರದ್ಧೆಯಿಂದ ಅಭಿನಯಿಸಿದ್ದಾರೆ. ಅವರು ಫಾತಿಮಾ ಪಾತ್ರವನ್ನು ಸುಲಭವಾಗಿ ನಿರ್ವಹಿಸಿದ್ದಾರೆ. ಆದರೆ, ಕೆಲವು ದೃಶ್ಯಗಳಲ್ಲಿನ ಭಾರವಾದ ಸಂಭಾಷಣೆಗಳಿಂದ ತೂಕವನ್ನು ಕಡಿಮೆ ಮಾಡಲಾಗಿದೆ. ಇದರಿಂದಾಗಿ ಅವರನ್ನು ನಟಿಯಾಗಿ ನಿರ್ಬಂಧಿಸಲಾಗಿದೆ". ನಂತರ, ಅವರು ಆಂಟೋನಿ ಚಿತ್ರದಲ್ಲಿ ಜೋಜು ಜಾರ್ಜ್ ಅವರೊಂದಿಗೆ ಆಕ್ರಮಣಕಾರಿ ಕಾಲೇಜು ವಿದ್ಯಾರ್ಥಿಯಾಗಿ ಅಭಿನಯಿಸಿದರು. ಕಲ್ಯಾಣಿಯವರಿಗೆ ಮೊದಲಾರ್ಧದಲ್ಲಿ ಕೆಲವು ಅದ್ಭುತ ಹೋರಾಟದ ದೃಶ್ಯಗಳು ಸಿಗುತ್ತವೆ. ಆದರೆ, ಅವರ ಪಾತ್ರದ ಮೊದಲ ಆಯಾಮದ ಚಿತ್ರಣವು ಸಹಾಯ ಮಾಡುವುದಿಲ್ಲ ಮತ್ತು ಅದು ಸಂಪರ್ಕವನ್ನು ಕಳೆದುಕೊಳ್ಳುತ್ತದೆ. ೨೦೨೪ ರ ಮೊದಲ ಬಿಡುಗಡೆಯಲ್ಲಿ, ಕಲ್ಯಾಣಿಯವರು ಪ್ರಣವ್ ಮೋಹನ್‌ಲಾಲ್ ಅವರೊಂದಿಗೆ ವರ್ಷಂಗಲ್ಕು ಶೇಷಮ್ ಚಿತ್ರಕ್ಕಾಗಿ ಮತ್ತೆ ಒಂದಾದರು. ಹಿಂದೂಸ್ತಾನ್ ಟೈಮ್ಸ್ ಪ್ರಕಾರ, "ಕಲ್ಯಾಣಿಯವರು ಮುಂದಿನ ಜೀನಿ ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ". == ಮಾಧ್ಯಮದಲ್ಲಿ == ಕಲ್ಯಾಣಿಯವರನ್ನು ಅತಿ ಹೆಚ್ಚು ಸಂಭಾವನೆ ಪಡೆಯುವ ಮಲಯಾಳಂ ನಟಿಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು ತಮ್ಮ ಹಲೋ ಚಿತ್ರದಲ್ಲಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರು. ಈ ಚಿತ್ರವು ಅವರ ವೃತ್ತಿಜೀವನಕ್ಕೆ ಸಂಭವಿಸಿದ ಅತ್ಯುತ್ತಮ ಚಿತ್ರವಾಗಿದೆ. ೨೦೧೭ ರ ೧೨೩ತೆಲುಗಿನ "ಉನ್ನತ ನಟಿಯರ" ಪಟ್ಟಿಯಲ್ಲಿ "ಹಲೋ" ಚಿತ್ರದ ಮೂಲಕ ಕಲ್ಯಾಣಿಯವರು ಉತ್ತಮ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಚಲನಚಿತ್ರ ವೃತ್ತಿಜೀವನದ ಬಗ್ಗೆ, ರೆಡಿಫ್.ಕಾಮ್‌ನ ಸುಭಾಷ್ ಕೆ.ಝಾ ಅವರು, "ಕಲ್ಯಾಣಿಯವರು ಮಲಯಾಳಂ ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ಸುಂದರ ಮತ್ತು ಅಪಾರ ಪ್ರತಿಭಾನ್ವಿತರಾದ ಅವರು ತಮ್ಮ ತಂದೆಯನ್ನು ಮೀರಿಸಿದ್ದಾರೆ" ಎಂದು ವ್ಯಕ್ತಪಡಿಸಿದರು. ಕಲ್ಯಾಣಿ ಅವರು ಕಲ್ಯಾಣ್ ಜ್ಯುವೆಲರ್ಸ್ ಮತ್ತು ಅಜಿಯೊದಂತಹ ಹಲವಾರು ಬ್ರಾಂಡ್‌ಗಳಿಗೆ ಪ್ರಮುಖ ಸೆಲೆಬ್ರಿಟಿಯಾಗಿ ಅನುಮೋದಕರಾಗಿದ್ದಾರೆ. ಅವರು "ರಿಟ್ಜ್" ಮತ್ತು "ಯು & ಐ" ಸೇರಿದಂತೆ ವಿವಿಧ ನಿಯತಕಾಲಿಕೆಗಳಿಗೆ ಮುಖಪುಟ ಮಾದರಿ ಆಗಿದ್ದಾರೆ. ೨೦೨೦ ರಲ್ಲಿ, ಕಲ್ಯಾಣಿಯವರನ್ನು ಕೊಚ್ಚಿ ಟೈಮ್ಸ್‌ನ ಅತ್ಯಂತ ಅಪೇಕ್ಷಣೀಯ ಮಹಿಳೆ ಎಂದು ಹೆಸರಿಸಲಾಯಿತು. ಅದೇ ವರ್ಷ, ಅವರು ಚೆನ್ನೈ ಟೈಮ್ಸ್‌ನ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ೮ನೇ ಸ್ಥಾನ ಪಡೆದರು ಮತ್ತು ಟೈಮ್ಸ್ ಮೋಸ್ಟ್ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ೪೧ನೇ ಸ್ಥಾನ ಪಡೆದರು. == ಚಲನಚಿತ್ರಗಳು == == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == == ಉಲ್ಲೇಖಗಳು ==